ಟ್ರಾನ್ಸಆಲ್ಪೈನ್ ಗಾಲ್ 
ಪ್ರ.ಶ.ಪು. 600ರಲ್ಲಿ ಗ್ರೀಕೊ-ರೋಮನ್ ಇತಿಹಾಸವನ್ನು ಪ್ರವೇಶಿಸಿತು. ಪ್ರ.ಶ.ಪು.ಸು. 400ರಿಂದ ರೋಮ್ ಮತ್ತು ಮಾಸ್ಸಿಲಿಯ (ಮಾರ್ಸೇಲ್ಸ) ಮೈತ್ರಿಯಿಂದಿದ್ದುವು. ಮುಂದೆ ಮಾಸ್ಸಿಲಿಯಟರಿಗೆ ಒಳನಾಡಿನ ಜನರ ದಾಳಿಯನ್ನು ತಡೆಯುವುದು ಅಸಾಧ್ಯವಾದಾಗ ರೋಮನ್ನರು ನಡುವೆ ಪ್ರವೇಶಿಸಿದರು. ಪ್ರ.ಶ.ಪು. 118ರಲ್ಲಿ ನಾರ್ಬೊ ಮಾರ್ಟಿಯಸ್ (ದಕ್ಷಿಣ ಫ್ರಾನ್ಸಿನ ನಾರ್ಬಾನ್) ರೋಮನ್ನರ ವಸಾಹತಾಯಿತು. ರೋಮನ್ ವ್ಯಾಪಾರಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಬರತೊಡಗಿದರು. ಕ್ಷಿಪ್ರದಲ್ಲಿಯೇ ಗಾಲ್ ರೋಮನೀ ಕೃತವಾಯಿತು.

ರೋಮನ್ ಆಕ್ರಮಣಪುರ್ವದ ಗಾಲ್ನಲ್ಲಿ ತಮ್ಮನ್ನು ಕೆಲ್ಟರೆಂದು ಕರೆದು ಕೊಳ್ಳುತ್ತಿದ್ದ ಗಾಲರಲ್ಲದೆ ಇನ್ನೂ ಹಲವು ಜನಾಂಗಗಳಿದ್ದುವೆಂದು ಸೀಸರನ ವ್ಯಾಖ್ಯಾನಗಳಿಂದ ತಿಳಿದುಬರುತ್ತದೆ. ಇವುಗಳ ನಡುವೆ ಸದಾ ಕದನಗಳು ನಡೆಯುತ್ತಿದ್ದುವು. ಈ ಕಲಹಗಳಿಂದಾಗಿ ಸೀಸರ್ ಇಲ್ಲಿ ಬಲವಾಗಿ ಬೇರೂರುವುದು ಸಾಧ್ಯವಾಯಿತು. ಪ್ರ.ಶ.ಪು. 52ರಲ್ಲೀ ವರ್ಸಿಂಜೆಟೂರಿಕ್ಸ ಎಂಬಾತ ಗಾಲ್ ಪ್ರದೇಶದ ವಿವಿಧ ಪಂಗಡಗಳನ್ನೂ ಒಟ್ಟುಗೂಡಿಸಿ ರೋಮನ್ನರ ಅಧಿಕಾರವನ್ನು ತೊಡೆದು ಹಾಕಲು ಯತ್ನಿಸಿ ವಿಫಲನಾದ. ಸೀಸರ್ ಗಾಲ್ನ ಮೇಲೆ ನಡೆಸಿದ ಧಾಳಿಯಿಂದಾಗಿ ರೋಮನ್ ಸಾಮ್ರಾಜ್ಯಕ್ಕೆ ಅಟ್ಲಾಂಟಿಕ್ ಸಾಗರ, ಇಂಗ್ಲಿಷ್ ಕಾಲುವೆ, ರೈನ್ ನದಿ-ಇವು ಎಲ್ಲೆಗಳಾದುವು. ಮುಂದೆ ಗಾಲ್ನ ಸಂಘಟನೆಯ ಭಾರವನ್ನು ಹೊತ್ತ ಆಗಸ್ಟಸ್ ಆ ಪ್ರದೇಶವನ್ನು ನಾರ್ಬೊನೆನ್ಸಿನ್, ಆಕ್ವಿಟೇನಿಯ, ಲಗ್ಡುನೆನ್ಸಿಸ್, ಬೆಲ್ಜಿಕ ಎಂದು ವಿಂಗಡಿಸಿದ. ನಾರ್ಬೊನೆನ್ಸಿಸ್ ಉಳಿದ ಗಾಲ್ ಪ್ರದೇಶಗಳಿಗಿಂತ ಭಿನ್ನವಾಗಿತ್ತು. ಅನೇಕ ರೋಮನ್ನರು ಇಲ್ಲಿ ನೆಲಸಿದ್ದರು. ಇಲ್ಲಿ ಅನೇಕ ನಗರಗಳೂ ಬೆಳೆದುವು. ಹಲವಾರು ಕಟ್ಟಡಗಳ ನಿರ್ಮಾಣವಾಯಿತು. ರೋಮನ್ ಸಾರ್ವಜನಿಕ ಜೀವನದಲ್ಲಿ ಖ್ಯಾತಿಗಳಿಸಿದ ಅನೇಕರು ಇಲ್ಲಿ ಹುಟ್ಟಿದರು.
 
ತಮ್ಮ ಆಳ್ವಿಕೆಯಲ್ಲಿ ರೋಮನ್ನರು ಕೆಲ್ಟ ಜನಾಂಗದ ಧಾರ್ಮಿಕ ನಂಬಿಕೆಗಳಿಗೆ ಸಂಬಂಧಪಟ್ಟ ಯಾವ ವಿಷಯಕ್ಕೂ ಕೈಹಾಕಲಿಲ್ಲ. ಕೆಲಿಕ್ ದೇವರುಗಳಿಗೆ ರೋಮನ್ ಹೆಸರುಗಳನಿಟ್ಟರೂ ಕೆಲ್್ಟಕ್ ನೀತಿನಿಯಮಗಳೇ ಮುಂದುವರಿದುವು. ರೋಮನ್ ಆಡಳಿತದ ವಿರುದ್ಧವಾದ ದಂಗೆಗಳು ಕ್ರಮೇಣ ಕಡಿಮೆಯಾದುವು.

\2-3ನೆಯ ಶತಮಾನಗಳಲ್ಲಿ ಗಾಲ್ನ ಎಲ್ಲೆಗಳ ಭದ್ರತೆ ಕಡಿಮೆಯಾಗತೊಡಗಿತು. ಬಹುಶ, 257ರಲ್ಲಿ ಫ್ರಾಂಕರು ಗಾಲ್ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನುಗ್ಗಿದರು. ಪಾಸ್ಟ್ಯುಮಸ್ ಎಂಬವನು ಇವರ ಧಾಳಿಯನ್ನಡಗಿಸಿ ಸ್ವತಂತ್ರ ರೋಮನೀಕೃತ ರಾಜ್ಯ ಸ್ಥಾಪಿಸಿದ. ಪ್ರ.ಶ. 268ರಲ್ಲಿ ಸ್ಪೇನ್ ಮತ್ತು ನಾರ್ಬೊನೆನ್ಸಿಸ್ ಬೇರೆಯಾದರೂ 12ನೆಯ ಕ್ಲಾಡಿಯಸ್ ಪ್ರಭುತ್ವವನ್ನೊಪ್ಪಿದುವು. 3ನೆಯ ಶತಮಾನದ ಅಂತ್ಯದಲ್ಲಿ ಬಾಗೌಡೆ ಎಂಬ ದರೋಡೆಕಾರರ ಹಾವಳಿಗೆ ಇದು ತುತ್ತಾಗಿತ್ತು. ಮುಂದೆ ಆಗಿಂದಾಗ್ಗೆ ಇದು ಹೊರಗಿನವರ ಧಾಳಿಗೆ ಒಳಗಾತ್ತಿತ್ತು. 406ರ ಕೊನೆಯಲ್ಲಿ ವ್ಯಾಂಡಲರು ಮತ್ತು ಇತರರು ವ್ಯಾಪಕವಾಗಿ ಇದನ್ನು ಆಕ್ರಮಿಸಿಕೊಂಡರು. ಆದರೂ ಇದು ಬಹಳ ಕಾಲ ರೋಮನ್ ನಾಗರಿಕತೆಯ ಕೊತ್ತಲವಾಗಿ ಉಳಿದಿತ್ತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ